ಉತ್ಪಾದೀ ವ್ಯಯ
	ಭವಿಷ್ಯದಲ್ಲಿ ಆರ್ಥಿಕ ಕಲ್ಯಾಣ ಸಾಧಿಸುವ ಸಾರ್ವಜನಿಕ (ಸರ್ಕಾರಿ) ಖರ್ಚು (ಪ್ರೊಟಕ್ಟಿವ್ ಎಕ್ಸ್‍ಪೆಂಡಿಚರ್). ಸಾರ್ವಜನಿಕ ಹಣವನ್ನು ಯಾವ ಯಾವ ಕಾರ್ಯಗಳಿಗೆ ಖರ್ಚುಮಾಡಬೇಕೆಂಬ ಬಗ್ಗೆ ಕಾಲದಿಂದ ಕಾಲಕ್ಕೆ ಭಾವನೆಗಳು ಬದಲಾಗುತ್ತಿವೆ. ಆಯಾ ಕಾಲದ ದೃಷ್ಟಿಕೋನಗಳಿಗೆ ಅನುಸಾರವಾಗಿ ಉತ್ಪಾದೀ ವ್ಯಯದ ಅರ್ಥವೂ ವ್ಯತ್ಯಾಸಹೊಂದಿದೆ. ಸಾರ್ವಜನಿಕ ಹಣವನ್ನು ಖರ್ಚು ಮಾಡುವ ಅಧಿಕಾರ ಆಯಾ ದೇಶಗಳ ಸರ್ಕಾರಗಳಿಗೆ ಸೇರಿದ್ದು. ಆದರೆ ಸರ್ಕಾರಕ್ಕೆ ಬರುವ ಹಣ ಆ ದೇಶದ ಪ್ರಜೆಗಳಿಂದ ಬರುತ್ತದೆಯಾದ್ದರಿಂದ ಪ್ರತಿಯೊಂದು ದೇಶದಲ್ಲೂ ಸಾರ್ವಜನಿಕ ಹಣವನ್ನು ವೆಚ್ಚ ಮಾಡುವಾಗ ಕೆಲವು ತತ್ತ್ವಗಳನ್ನು ಪಾಲಿಸಬೇಕೆಂಬುದು ಎಲ್ಲ ದೇಶಗಳಲ್ಲೂ ವ್ಯಕ್ತವಾಗಿರುವ ಅಭಿಪ್ರಾಯ. ಈ ತತ್ವ್ತಗಳನ್ನು ಪಾಲಿಸದಿದ್ದರೆ ಹಣ ವ್ಯರ್ಥವಾಗಿ ದೇಶದ ಪ್ರಜೆಗಳಿಗೆ ಅದರಿಂದ ಉಪಯೋಗವಾಗುವ ಬದಲು, ಅನಾಹುತವೇ ಸಂಭವಿಸೀತೆಂಬುದು ತಜ್ಞರ ಅಭಿಪ್ರಾಯ. ಸಾರ್ವಜನಿಕ ಮುಂದಾಳುಗಳೂ ರಾಜಕೀಯ ನಾಯಕರೂ ಅರ್ಥಶಾಸ್ತ್ರಜ್ಞರೂ ಸಾರ್ವಜನಿಕ ಹಣವನ್ನು ಖರ್ಚುಮಾಡಲು ಅನುಸರಿಸಬೇಕಾದ ನಿಯಮಗಳನ್ನು ಆಗಿಂದಾಗ್ಗೆ ಪ್ರತಿಪಾದಿಸಿದ್ದಾರೆ.

	ಉತ್ಪಾದೀ ವ್ಯಯವನ್ನು ಫಲದಾಯಕ ವ್ಯಯವೆಂದೂ ಕರೆಯಬಹುದು. 18-19ನೆಯ ಶತಮಾನಗಳಲ್ಲಿ ಯೂರೋಪಿನ ಕೆಲವು ಸರ್ಕಾರಗಳು ಸಾರ್ವಜನಿಕ ಹಣವನ್ನು ತಮ್ಮ ಮನಬಂದಂತೆ ಖರ್ಚು ಮಾಡುತ್ತಿದ್ದುವು. ಇಂಥ ಮನೋಭಾವವನ್ನು ಕೆಲವು ಅರ್ಥಶಾಸ್ತ್ರಜ್ಞರು ಖಂಡಿಸಿ, ಸಾರ್ವಜನಿಕ ಹಣದ ವ್ಯಯದಿಂದ ಸಾಕಷ್ಟು ಪ್ರತಿಫಲ ದೊರೆಯಬೇಕೆಂದು ಪ್ರತಿಪಾದಿಸಲು ಪ್ರಾರಂಭಿಸಿದರು.

	ಹಿಂದಿನ ಕಾಲದಲ್ಲಿ ಪ್ರತಿ ದೇಶದಲ್ಲೂ ಸರ್ಕಾರ ನಿರ್ವಹಿಸಬೇಕಾದ ಕರ್ತವ್ಯಗಳು ಬಹಳ ಮಿತವಾಗಿದ್ದುವು. 1 ಶತ್ರುಗಳ ಆಕ್ರಮಣದಿಂದ ದೇಶದ ರಕ್ಷಣೆ, 2 ದೇಶದ ಒಳಗಡೆ ಶಾಂತಿಪಾಲನೆ ಮತ್ತು 3 ನ್ಯಾಯಾಂಗ ವ್ಯವಸ್ಥೆಯ ನಿರ್ಮಾಣ ಹಾಗೂ ನ್ಯಾಯಪಾಲನೆ-ಈ ಮೂರು ಕರ್ತವ್ಯಗಳನ್ನು ಸರ್ಕಾರ ನಿರ್ವಹಿಸಿದರೆ ಸಾಕೆಂಬ ಭಾವನೆಯಿತ್ತು. ಇವನ್ನು ಸರ್ಕಾರ ಸಾಧಿಸಿದರೆ ದೇಶದಲ್ಲಿ ನೆಮ್ಮದಿ ನೆಲೆಸಿ ಪ್ರಜೆಗಳು ಆರ್ಥಿಕ ಪ್ರಗತಿಯಲ್ಲಿ ತೊಡಗಲು ಸಾಧ್ಯವಾಗುತ್ತದೆಯೆಂಬುದಾಗಿ ಆಗ ನಂಬಲಾಗಿತ್ತು. ಈ ಕರ್ತವ್ಯಗಳನ್ನು ನಿರ್ವಹಿಸಬೇಕಾದರೆ ಸರ್ಕಾರಕ್ಕೆ ಎಷ್ಟು ಹಣ ಬೇಕೋ ಅಷ್ಟನ್ನು ಮಾತ್ರ ವ್ಯಯಮಾಡಬೇಕೆಂದು ಅನೇಕ ಪ್ರಸಿದ್ಧ ಅರ್ಥಶಾಸ್ತ್ರಜ್ಞರು ಪ್ರತಿಪಾದಿಸಿದ್ದರು. ಇವನ್ನು ಬಿಟ್ಟು ಬೇರೆ ಕಾರ್ಯಗಳಿಗೆ ಸರ್ಕಾರ ಸಾರ್ವಜನಿಕ ಹಣವನ್ನು ವ್ಯಯ ಮಾಡಿದರೆ ಅದು ಸಂಪೂರ್ಣ ವ್ಯರ್ಥವೆಂಬುದು ಆಗಿನ ಕಾಲದ ಭಾವನೆ. ಆದರೆ ಈಗ ಸರ್ಕಾರದ ವೆಚ್ಚ ಊಹಿಸಲಾರದಷ್ಟು ದಿಕ್ಕುಗಳಲ್ಲಿ ವ್ಯಾಪಿಸಿದೆ. ಜನರಿಗೆ ಸಕಲ ಸೌಕರ್ಯಗಳನ್ನೂ ಒದಗಿಸಲೇಬೇಕಾದ್ದು ಇಂದು ಸರ್ಕಾರದ ಕರ್ತವ್ಯ. ಸಾರ್ವಜನಿಕ ಆರೋಗ್ಯ, ವಿದ್ಯಾಭ್ಯಾಸ, ಕಾರ್ಮಿಕ ಕ್ಷೇಮಾಭ್ಯುದಯ, ಹಿಂದುಳಿದ ವರ್ಗದವರಿಗೆ ಪ್ರೋತ್ಸಾಹ, ಸಾಮಾಜಿಕ ಭದ್ರತೆ-ಇವನ್ನೆಲ್ಲ ಸಾಧಿಸುವುದು ಈಗಿನ ಸರ್ಕಾರಗಳ ಕರ್ತವ್ಯ. ಹಿಂದಿನ ಕಾಲದಲ್ಲಿ ಇಂಥ ಬಾಬುಗಳ ಮೇಲಿನ ವೆಚ್ಚವನ್ನು ಫಲದಾಯಕವಲ್ಲದ ವೆಚ್ಚವೆಂದು ಭಾವಿಸಿ ಟೀಕಿಸಲಾಗುತ್ತಿತ್ತು. ಆದರೆ ಇಂದು ಇವೆಲ್ಲ ಉತ್ಪಾದೀ ವ್ಯಯಗಳು.

	ಇಪ್ಪತ್ತನೆಯ ಶತಮಾನ ಪ್ರಾರಂಭವಾದ ಮೇಲೆ ಅದರಲ್ಲೂ ಮೊದಲನೆಯ ಮಹಾಯುದ್ದವಾದ ಮೇಲೆ ಅರ್ಥಶಾಸ್ತ್ರಜ್ಞರ ಮತ್ತು ರಾಜಕೀಯ ನಿಪುಣರ ದೃಷ್ಟಿಕೋನವೇ ಬದಲಾಯಿಸಿದೆ. ಹಿಂದೆ ಯಾವುದನ್ನು ಫಲದಾಯಕವಲ್ಲದ ವೆಚ್ಚ ಎಂದು ಭಾವಿಸಿದ್ದರೋ ಅವುಗಳನ್ನು ಈಗ ಫಲದಾಯಕವಾದ ಅಥವಾ ಉತ್ಪಾದೀ ವೆಚ್ಚ ಎಂದು ಕರೆಯಲು ಆರಂಭಿಸಿದ್ದಾರೆ. ಸಾರ್ವಜನಿಕ ಆರೋಗ್ಯ ಮತ್ತು ವಿದ್ಯಾಭ್ಯಾಸ ಬಾಬುಗಳ ಮೇಲೆ ವೆಚ್ಚ ಮಾಡುವುದರಿಂದ ದೇಶದ ಜನರ ಸಂಪತ್ತು ಅಭಿವೃದ್ದಿಗೊಂಡು ಆರ್ಥಿಕಪ್ರಗತಿಗೆ ಸಹಾಯವಾಗುವುದು ಎಂದು ಎಲ್ಲ ದೇಶಗಳಲ್ಲೂ ಅಭಿಪ್ರಾಯಪಡಲಾಗಿದೆ. ಹಿಂದುಳಿದ ದೇಶಗಳಲ್ಲಿ ಅಭಿವೃದ್ದಿ ಸಾಧಿಸಬೇಕಾದರೆ ಆ ದೇಶಗಳಲ್ಲಿ ಸರ್ಕಾರಗಳು ತಾವೆ ಮುತುವರ್ಜಿ ವಹಿಸಿ ಆರೋಗ್ಯ, ವಿದ್ಯಾಭ್ಯಾಸ, ಕಾರ್ಮಿಕ ಕ್ಷೇಮಾಭ್ಯುದಯ ಇತ್ಯಾದಿ ಬಾಬುಗಳ ಮೇಲೆ ಖರ್ಚು ಮಾಡುವುದೇ ಅಲ್ಲದೆ, ಖಾಸಗಿಯವರು ಸ್ಥಾಪಿಸಲು ಸಾಧ್ಯವಿಲ್ಲದ ಮೂಲಭೂತ ಕೈಗಾರಿಕೆಗಳನ್ನೂ ಸ್ಥಾಪಿಸಬೇಕು, ಆರ್ಥಿಕ ರಂಗದಲ್ಲಿ ಅತ್ಯಾವಶ್ಯಕವಾದ ಮುಂದಾಳುತನದ ಕೆಲಸ ನಿರ್ವಹಿಸಬೇಕು ಎಂದು ಪ್ರತಿಪಾದಿಸಲಾಗಿದೆ. ಇಂಥ ಖರ್ಚುಗಳನ್ನೆಲ್ಲ ಉತ್ಪಾದೀ ಖರ್ಚು ಎಂದು ಭಾವಿಸಲಾಗಿದೆ.

	ಈ ವಿಚಾರವನ್ನು ಸೂಕ್ಷ್ಮವಾಗಿ ಪರಿಶೀಲಿಸುವುದಾದರೆ, ಇಂಥದು ಉತ್ಪಾದೀ ವ್ಯಯ, ಇಂಥದ್ದು ಅಲ್ಲ ಎಂದು ನಿರ್ದಿಷ್ಟವಾಗಿ ಹೇಳುವುದು ಇಂದು ಸಾಧ್ಯವಿಲ್ಲ. ಈಗಿನ ಕಾಲದಲ್ಲಿ ಪ್ರತಿಯೊಂದು ರೀತಿಯ ಸಾರ್ವಜನಿಕ ವ್ಯಯವೂ ಪ್ರತ್ಯಕ್ಷವಾಗಿಯಾಗಲಿ ಪರೋಕ್ಷವಾಗಿಯಾಗಲಿ ಆರ್ಥಿಕ ಕ್ಷೇತ್ರದಲ್ಲಿ ಫಲದಾಯಕವಾಗಿ ಪರಿಣಮಿಸುತ್ತದೆ. ಆದ್ದರಿಂದಲೇ ಆಧುನಿಕ ಅರ್ಥಶಾಸ್ತ್ರಜ್ಞರು ಸಾರ್ವಜನಿಕ ವ್ಯಯದಲ್ಲಿ ಇಂಥ ವಿಭಜನೆಯನ್ನು ಒಪ್ಪುವುದಿಲ್ಲ. ಅವರು ಇದನ್ನು ಕುರಿತು ದೀರ್ಘವಾಗಿ ಚರ್ಚಿಸಲೂ ಹೋಗುವುದಿಲ್ಲ.								
(ಎನ್.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ